ಕಾಂತಾರದಲ್ಲಿ ದೃಶ್ಯ ಚಿತ್ರಣ ಬೆಳಗಿಸಿದ ಖಾರ್ವಿಕೇರಿಯ ವಿಸ್ಮಯ ಪ್ರತಿಭೆ ವಿಜೇತ್ ವಿ ಖಾರ್ವಿ

ಕಾಂತಾರದಲ್ಲಿ ದೃಶ್ಯ ಚಿತ್ರಣ ಬೆಳಗಿಸಿದ ಖಾರ್ವಿಕೇರಿಯ ವಿಸ್ಮಯ ಪ್ರತಿಭೆ ವಿಜೇತ್ ವಿ ಖಾರ್ವಿ

ಕಾಂತಾರ ದೈವಸಾಕ್ಷಾತ್ಕಾರ ಇದು ಕಾಂತಾರ ಸಿನಿಮಾ ನೋಡಿದ ಪ್ರೇಕ್ಷಕರಿಂದ ಬರುವ ಪ್ರೀತಿಯ ಉದ್ಗಾರ. ಇಡೀ ಜಗತ್ತು ಬೆರಗು ಕಣ್ಣುಗಳಿಂದ ಕನ್ನಡ ಚಿತ್ರರಂಗದತ್ತ ನೋಡುವಂತೆ ಅದ್ಭುತವನ್ನೇ ಸೃಷ್ಟಿಸಿರುವ ರಿಷಬ್ ಶೆಟ್ಟಿಯವರಂಥಹ ಅಸಾಮಾನ್ಯ ಕಲಾವಿದನೊಂದಿಗೆ ತೆರೆಯ ಹಿಂದೆ ಚಿತ್ರದ ಸ್ಥಿರ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿ ಚಿತ್ರದ ದೃಶ್ಯ ಚಿತ್ರಣವನ್ನು ಅರಳಿಸಿದವರು ನಮ್ಮ ಸಮಾಜದ ಪ್ರತಿಭೆ ವಿಜೇತ್ ವಿ ಖಾರ್ವಿ ಕಾಂತಾರ ಚಿತ್ರದ ಪೋಸ್ಟರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಅದನ್ನು ಅಭೂತಪೂರ್ವವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದವರು ವಿಜೇತ್ ವಿ ಖಾರ್ವಿ. ನಿಬ್ಬೆರಗಾಗಿಸುವ ತಾಂತ್ರಿಕ ಕೌಶಲ್ಯದಿಂದ ಕಾಂತಾರ ಚಿತ್ರದ ದೃಶ್ಯ ಕಾವ್ಯಗಳನ್ನು ಅದ್ಬುತವಾಗಿ ಸೆರೆಹಿಡಿದು ವಿಜೇತ್ ಅದಕ್ಕೊಂದು ಆಕೃತಿ ತಂದುಕೊಟ್ಟಿದ್ದಾರೆ. ನೀರಿಗಿಳಿಯದೇ ಹೇಗೆ ಈಜು ಕಲಿಯಲು ಸಾಧ್ಯವಿಲ್ಲವೋ ಹಾಗೆಯೇ ಕಲಾಸೃಷ್ಟಿಯಲ್ಲಿಯೂ ಸೃಷ್ಟಿಸುವ ಕೆಲಸಕ್ಕಿಳಿದ ಬಳಿಕವೇ ಅದಕ್ಕೆ ಸಂಬಂಧಿಸಿದ ಹತ್ತು ಹಲವು ಸಂಗತಿಗಳು ತಿಳಿಯುವುದು. ಇದು ಎಲ್ಲಾ ಸೃಜನಶೀಲ ಕ್ರಿಯೆಗೂ ಸಂಬಂಧಿಸಿದ ವಿಚಾರ. ಛಾಯಾಗ್ರಹಣ ಎಂಬ ಸೃಜನಶೀಲ ಕಲೆ ವಿಜೇತ್ ಗೆ ಸಿದ್ದಿಸಿದ್ದು ಸ್ವಾರಸ್ಯಕರ ಸಾಂಧರ್ಭಿಕ ಸಮಯದಲ್ಲಿ ಹೊನ್ನಾವರದ ಅಜ್ಜಿ ಮನೆಗೆ ಹೋದಾಗ ಅಲ್ಲಿನ ಸ್ನೇಹಿತರಾದ ರಾಘು ಮೇಸ್ತರವರ R K ಸ್ಟುಡಿಯೋಕ್ಕೆ ಸಮಯ ಕಳೆಯಲು ಹೋಗುತ್ತಿದ್ದರು. ಹಾಗೆ ರಾಘು ಮೇಸ್ತಾರ ಜೊತೆಗೆ ಮದುವೆ ಕಾರ್ಯಕ್ರಮದಲ್ಲಿ ಹೋಗಲು ಆರಂಭಿಸಿದ ವಿಜೇತ್ ರಿಗೆ ಛಾಯಾಗ್ರಹಣದ ಕಲಿಕೆಯ ಅವಕಾಶವೂ ಲಭ್ಯವಾಯಿತು. ರಾಘು ಮೇಸ್ತ ವಿಜೇತರ ಪಾಲಿಗೆ ಛಾಯಾಗ್ರಹಣ ಕಲೆಯ ಗುರುವಾದರು ಛಾಯಾಗ್ರಹಣ ಕಲೆಯ ಅಪಾರ ಆಸಕ್ತಿಯಿದ್ದ ವಿಜೇತರಿಗೆ ರಾಘು ಮೇಸ್ತರವರು ಛಾಯಾಗ್ರಹಣ ಕಲೆಯ ಪ್ರಾಥಮಿಕ ಹಂತವನ್ನು ತಿದ್ದಿ ತೀಡಿ ಕಲಿಸಿಕೊಟ್ಟರು. ಇದು ಛಾಯಾಗ್ರಹಣದ ಸುಂದರ ರಂಗುರಂಗಿನ ಬಣ್ಣದ ಲೋಕಕ್ಕೆ ವಿಜೇತಾರನ್ನು ಕರೆದುಕೊಂಡು ಹೋಯಿತು. ಛಾಯಾಗ್ರಹಣ ಕಲೆಯ ಆಸಕ್ತಿ ಮತ್ತು ಕೂತೂಹಲ ಸಾಧನೆಯ ಹಂಬಲವಾಗಿ ಚಿಗುರೊಡೆದು ತಂದೆಯೊಡನೆ ತನಗೆ ಒಂದು ಕ್ಯಾಮೆರಾ ಬೇಕು ಎಂದು ವಿಜೇತ್ ಬೇಡಿಕೆ ಇಟ್ಟರು ಮಗನ ಅನಿರೀಕ್ಷಿತ ಬೇಡಿಕೆಗೆ ಪ್ರತಿ ಮಾತನಾಡದೇ ವಿಜೇತ್ ತಂದೆ ವಿಜಯ್ ನಾಯ್ಕ್ ರವರು ಮರುದಿನವೇ ಕ್ಯಾಮೆರಾ ಖರೀದಿಸಲು ವಿಜೇತರಿಗೆ ಹಣ ಒದಗಿಸಿಕೊಟ್ಟರು ತಂದೆಯ ಈ ಅನನ್ಯ ಕೊಡುಗೆಯನ್ನು ವಿಜೇತ್ ಅತ್ಯಂತ ಭಾವಾನಾತ್ಮಕವಾಗಿ ಸ್ಮರಿಸಿಕೊಳ್ಳುತ್ತಾರೆ. ತನ್ನ ಯಶಸ್ಸಿಗೆ ಬೆನ್ನುಲುಬು ಆದ ತಂದೆಯ ಬಗ್ಗೆ ಮಾತನಾಡುವಾಗ ವಿಜೇತ್ ಭಾವಪರವಶರಾಗುತ್ತಾರೆ ತಂದೆ ವಿಜಯ್ ವಿಜೇತ್ ಪಾಲಿಗೆ ಶುಭ ನುಡಿಯುವ ಶಕುನದ ಹಕ್ಕಿಯಾಗುತ್ತಾರೆ ಮರುದಿನವೇ ಆನ್ಲೈನ್ ಮೂಲಕ ಕ್ಯಾಮೆರಾ ತರಿಸಿಕೊಂಡ ವಿಜೇತ್ ಪ್ರಪ್ರಥಮ ಬಾರಿಗೆ ಕೇವಲ 500 ರೂಪಾಯಿಗೆ ಮದುವೆ ಕಾರ್ಯಕ್ರಮವನ್ನು ವಹಿಸಿಕೊಳ್ಳುತ್ತಾರೆ. ವಿಜೇತ್ ಪದವಿ ಶಿಕ್ಷಣ ಮುಗಿದ ಬಳಿಕ ವಿಜೇತ್ ತಂದೆ ತಾಯಿಗಳಾದ ವಿಜಯ್ ಮತ್ತು ಅಮೃತಾ ಮಗನಿಗೆ ಒಂದುವರೆ ಲಕ್ಷ ಮೌಲ್ಯದ ಕ್ಯಾಮೆರಾ ತೆಗಿಸಿಕೊಟ್ಟು ಮಗನ ಉಜ್ವಲ ಭವಿಷ್ಯಕ್ಕೆ ತಳಪಾಯ ಹಾಕಿದರು. ಕಾಲೇಜು ಶಿಕ್ಷಣ ಕಲಿಯುತ್ತಿರುವ ಸಂದರ್ಭದಲ್ಲೇ ವಿಜೇತ್ ರಿಗೆ ಹಲವಾರು ಮದುವೆ ಕಾರ್ಯಕ್ರಮಗಳು ಮತ್ತು ಮಾಡೆಲಿಂಗ್ ಕಾರ್ಯಕ್ರಮಗಳ ಪೋಟೊ ಶೂಟ್ ಅವಕಾಶಗಳು ಒದಗಿ ಬಂದವು. ಉಜಿರೆಯ SDM ಕಾಲೇಜಿನಲ್ಲಿ ಪ್ರತ್ರಿಕೋದ್ಯಮ ಓದುತ್ತಿರುವ ಜೊತೆಗೆ ವಿಜೇತ್ ವೃತ್ತಿಪರ ಛಾಯಾಗ್ರಾಹಕರಾಗಿ ನೆಲೆ ಕಂಡುಕೊಂಡಿದ್ದರು. ಡಿಗ್ರಿ ತರಗತಿಗಳು ಮುಗಿದು ರಜೆ ಸಮಯದಲ್ಲಿ ಮನೆಯಲ್ಲಿದ್ದಾಗ ವಿಜೇತ್ ರವರಿಗೆ ಕುಂದಾಪುರದ ರಕ್ಷಿತ್ ಎಂಬವರಿಂದ ಛಾಯಾಗ್ರಹಣದ ಕರೆ ಬಂತು ರಿಷಬ್ ಶೆಟ್ಟಿಯವರ ಹರಿಕಥೆಯಲ್ಲ ಗಿರಿಕಥೆ ಎಂಬ ಸಿನಿಮಾದ ಸ್ಥಿರ ಛಾಯಾಗ್ರಹಣಕ್ಕೆ ಅವಕಾಶ ಒದಗಿ ಬಂತು ಮೈಸೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ಸಂಪೂರ್ಣವಾಗಿ ಆ ಚಿತ್ರದ ಸ್ಥಿರ ಛಾಯಾಗ್ರಹಣವನ್ನು ಬಹಳ ಸುಂದರವಾಗಿ ವಿಜೇತ್ ಮಾಡಿಕೊಟ್ಟರು ಅಂದಿನಿಂದ ವಿಜೇತ್ ರ ಸಿನಿಪಯಣ ಆರಂಭವಾಯಿತು. ಹರಿಕಥೆಯಲ್ಲ ಗಿರಿಕಥೆ ಚಿತ್ರದ ಸ್ಥಿರ ಛಾಯಾಗ್ರಹಣದಿಂದ ದಿಲ್ ಖುಷ್ ಆದ ರಿಷಬ್ ಶೆಟ್ಟಿಯವರಿಗೆ ವಿಜೇತ್ ತುಂಬಾ ಹತ್ತಿರವಾದರು ಅವರ ಮನೆಯ ಶುಭ ಸಮಾರಂಭದ ಕಾರ್ಯಕ್ರಮಗಳ ಪೋಟೊ ಚಿತ್ರೀಕರಣದ ಅವಕಾಶವೂ ಒದಗಿ ಬಂತು. ಈ ಚಿತ್ರದ ಅವಕಾಶದ ಬಳಿಕ ವಿಜೇತ್ ಮನೆಯಲ್ಲಿ ಇದ್ದಾಗ ರಿಷಬ್ ಶೆಟ್ಟಿಯವರ ಮ್ಯಾನೇಜರ್ ಸುಹಾಸ್ ಶೆಟ್ಟಿಯವರಿಂದ ಕಾಂತಾರ ಚಿತ್ರದ ನಟನೆಗೆ ಮಕ್ಕಳ ಆಯ್ಕೆಗಾಗಿ ಆಡಿಷನ್ ಗಾಗಿ ಪೋಟೊ ಶೂಟ್ ಗೆ ಬರಲು ಕರೆ ಬಂತು. ಅಲ್ಲಿ ಸ್ಥಿರ ಚಿತ್ರೀಕರಣದ ಅವಕಾಶವೂ ಲಭ್ಯವಾಯಿತು ರಿಷಬ್ ಶೆಟ್ಟಿಯವರಂತೂ ನಮ್ಮ ಹುಡುಗನೇ ಇರಲಿ ಎಂದು ಹೇಳಿದರು ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ಸ್ ನ ಕಾಂತಾರ ಚಿತ್ರದ ಚಿತ್ರೀಕರಣಕ್ಕೆ ಪೂರ್ವಭಾವಿಯಾಗಿ ಮೂರು ತಿಂಗಳ ಮೊದಲು ಕೆರಾಡಿ ಕಾಡಿನಲ್ಲಿ ಚಿತ್ರದ ಸೆಟ್ಟಿಂಗ್ ನಿರ್ಮಾಣ ಪ್ರಕ್ರಿಯೆಯಲ್ಲಿ ಕಲಾ ವಿಭಾಗದಲ್ಲಿ ವಿಜೇತ್ ತನ್ನನ್ನು ತೊಡಗಿಸಿಕೊಂಡರು ಕಾಂತಾರ ಚಿತ್ರದ ಮೇಕಿಂಗ್ ಮತ್ತು ಚಿತ್ರೀಕರಣ ಒಟ್ಟು ಒಂದುವರೆ ವರ್ಷದ ನಿರಂತರ ಕಠಿಣ ಪರಿಶ್ರಮವಾಗಿದ್ದು, ಕ್ರಮೇಣ ವಿಜೇತ್ ರಿಗೆ ಸ್ಥಿರ ಛಾಯಾಗ್ರಹಣದ ಜೊತೆಗೆ ವೀಡಿಯೋಗ್ರಾಫಿ ಮಾಡುವ ಅವಕಾಶವೂ ಪ್ರಾಪ್ತಿಯಾಯಿತು. ಖ್ಯಾತ ಕಲಾತಜ್ಞ ಧರಣಿ ಗಂಗೆಪುತ್ರ ನೇತೃತ್ವದಲ್ಲಿ ಸುಮಾರು ಇಪ್ಪತ್ತೈದು ಕುಶಲ ಕಲಾವಿದರ ಜೊತೆಗೆ ವೀಜೇತ್ ಕಾಂತಾರ ಚಿತ್ರದ ಮೇಕಿಂಗ್ ಕಾರ್ಯ ನಿರ್ವಹಿಸುತ್ತಿದ್ದರು ಎಲ್ಲರಿಗೂ ಹೆಮ್ಮಾಡಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು ವಿಜೇತ್ ಹತ್ತಿರದಲ್ಲಿ ಮನೆಯಿದ್ದರೂ ಬರುತ್ತಿರಲಿಲ್ಲ ಚಿತ್ರ ನಿರ್ಮಾಣದ ಮೇಕಿಂಗ್ ಮತ್ತು ಛಾಯಾಗ್ರಹಣ ಪ್ರಕ್ರಿಯೆಗಳಲ್ಲಿ ವಿಜೇತ್ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಂತಾರ ಚಿತ್ರದ ಚಿತ್ರೀಕರಣದ ಸಮಯದ ಅವಿಸ್ಮರಣೀಯ ಅನುಭವಗಳನ್ನು ಹೃದಯಂಗಮವಾಗಿ ತೆರೆದಿಡುವ ವಿಜೇತ್ ಶೂಟಿಂಗ್ ಸೆಟ್ ಅತ್ಯಂತ ಆಹ್ಲಾದಕರವಾಗಿತ್ತು ಮತ್ತು ರಿಷಬ್ ಶೆಟ್ಟಿಯವರು ತನ್ನನ್ನು ಅತ್ಯಂತ ಪ್ರೀತಿಯಿಂದ ನಮ್ಮ ಹುಡುಗ ಎಂದು ಕರೆಯುತ್ತಿದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ. ಕನ್ನಡ ಚಿತ್ರವನ್ನು ಕನ್ನಡ ಭಾಷೆಯಲ್ಲಿ ಜಗತ್ತಿನಾದ್ಯಂತ ಜನ ನೋಡಿ ಸಂಭ್ರಮ ಪಡುವುದೇ ನಿಜವಾದ ಫ್ಯಾನ್ ಇಂಡಿಯಾ ಎಂಬ ರಿಷಬ್ ಶೆಟ್ಟಿಯವರ ಮಾತುಗಳನ್ನು ನೆನಪಿಸಿಕೊಳ್ಳುವ ವಿಜೇತ್ ರವರು ಇಂತಹ ಅದ್ಬುತ ಚಿತ್ರದ ಛಾಯಾಗ್ರಹಣದ ಅವಕಾಶ ತನಗೆ ಒದಗಿ ಬಂದಿದ್ದು ತನ್ನ ಭಾಗ್ಯವೆಂದು ಹೇಳುತ್ತಾರೆ. ನಿಜಕ್ಕೂ ಕಾಂತಾರ ಚಿತ್ರ ಜಗತ್ತಿನಲ್ಲಿ ವಿಸ್ಮಯಕಾರಿ ದಾಖಲೆಯನ್ನು ನಿರ್ಮಿಸಿದ್ದು ಇಡೀ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಈ ಚಿತ್ರದ ಡಬ್ಬಿಂಗ್ ಕಾರ್ಯವನ್ನು ಆಯಾಯಾ ಭಾಷೆಯಲ್ಲಿ ಪ್ರಪಂಚದಾದಂತ್ಯ ಬೇಡಿಕೆಗಳು ಕೇಳಿ ಬಂದಿದೆ ಒಳ್ಳೆಯ ಕ್ರಿಯೇಟಿವಿಟಿಯಿಂದ ಚಿತ್ರ ನಿರ್ಮಾಣ ಮಾಡಿದರೆ ಜನ ಖಂಡಿತಾ ನೋಡುತ್ತಾರೆ ಎಂಬುದಕ್ಕೆ ಕಾಂತಾರ ಚಿತ್ರವೇ ಸಾಕ್ಷಿ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಕಾಂತಾರ ಚಿತ್ರದಲ್ಲಿ ಕರಾವಳಿಯ ಜನಪದ ಕ್ರೀಡೆಯಾದ ಕಂಬಳದ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ದೃಶ್ಯದ ಸ್ಥಿರ ಚಿತ್ರವನ್ನು ವಿಜೇತ್ ಅದ್ಬುತವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಕೆರಾಡಿ ಕಂಬಳದ ಚಿತ್ರಣ ಇಲ್ಲಿ ಲೈವ್ ಆಗಿ ಸೆರೆಹಿಡಿಯಲಾಗಿದ್ದು, ರಿಷಬ್ ಶೆಟ್ಟಿಯವರು ಕಂಬಳದಲ್ಲಿ ಕೋಣನನ್ನು ಓಡಿಸಲು ಪೂರ್ವಭಾವಿಯಾಗಿ ಮಹೇಶ್ ಭಟ್ ಎಂಬುವರ ಬಳಿ ಎರಡು ದಿನಗಳ ಕಾಲ ತರಬೇತಿ ಪಡೆದುಕೊಂಡಿದ್ದರು. ಕಂಬಳದ ಈ ಅಪೂರ್ವ ದೃಶ್ಯಗಳನ್ನು ವಿಜೇತ್ ಅದ್ಬುತವಾಗಿ ಸೆರೆಹಿಡಿದಿದ್ದು,ಇದು ಕಾಂತಾರ ಪೋಸ್ಟರ್ ನಲ್ಲಿ ಚಿತ್ತಾಕರ್ಷಕವಾಗಿ ಕಂಗೊಳಿಸುತ್ತಿದೆ. ಕರಾವಳಿಯವರಿಗೆ ಮೀನು ಇಲ್ಲದೇ ಊಟ ಪರಿಪೂರ್ಣವಾಗುವುದಿಲ್ಲ ಮೀನು ಕೊಚ್ಚುವುದು ಕೂಡಾ ನಾಜೂಕಿನ ಕೆಲಸ ಕಾಂತಾರ ಚಿತ್ರದಲ್ಲಿ ನಾಯಕಿ ಮೀನು ಕೊಚ್ಚುವ ದೃಶ್ಯ ಬರುತ್ತದೆ ಈ ದೃಶ್ಯ ಸಹಜವಾಗಿ ಮೂಡಿಬರಲು ಸಪ್ತಮಿ ಮೀನು ಕೊಚ್ಚುವುದನ್ನು ಕಲಿಯಲು ವಿಜೇತ್ ರವರ ಮನೆಗೆ ಬಂದಿದ್ದರು ವಿಜೇತ್ ತಾಯಿ ಅಮೃತಾರವರು ಸಪ್ತಮಿಯವರಿಗೆ ಮೀನು ಕೊಚ್ಚುವುದನ್ನು ಕಲಿಸಿದರು ಬಳಿಕ ಅದೇ ಮೀನಿನ ಸಾರು ಮಾಡಿ ಸಪ್ತಮಿಗೆ ಉಣಬಡಿಸಲಾಯಿತು ವಿಜೇತ್ ತಾಯಿ ಅಮೃತಾ ತನಗೆ ಮೀನು ಕೊಚ್ಚುವುದನ್ನು ಕಲಿಸಿದ್ದರಿಂದ ಚಿತ್ರದಲ್ಲಿ ಮೀನು ಕೊಚ್ಚುವ ದೃಶ್ಯ ಸಹಜವಾಗಿ ಮೂಡಿ ಬಂತು ಎಂದು ನಟಿ ಸಪ್ತಮಿ ಗೌಡ ಸಂದರ್ಶನವೊಂದರಲ್ಲಿ ಹೃದಯ ತುಂಬಿ ಹೇಳಿದ್ದಾರೆ. ಈ ಚಿತ್ರದ ಡಬ್ಬಿಂಗ್ ಕಾರ್ಯವನ್ನು ಆಯಾಯಾ ಭಾಷೆಯಲ್ಲಿ ಮಾಡಿಕೊಡಬೇಕೆಂದು ಪ್ರಪಂಚದಾದಂತ್ಯ ಬೇಡಿಕೆಗಳು ಕೇಳಿ ಬಂದಿದೆ. ಕರಾವಳಿ ಜಿಲ್ಲೆಯ ದೈವರಾಧನೆ, ಕೋಲಕ್ಕೆ ಸಂಬಂಧಪಟ್ಟ ವಿಷಯವಿರುವ ಕಾಂತಾರ ಚಿತ್ರ ಕರಾವಳಿ ಜಿಲ್ಲೆಯವರಷ್ಟೇ ಸ್ವೀಕಾರ ಮಾಡಬಹುದು ಎಂಬ ಊಹೆಯನ್ನು ಮೀರಿ ಇಂದು ಕಾಂತಾರ ಚಿತ್ರ ಪ್ರಪಂಚದ ಮೂಲೆಮೂಲೆಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ ಇಡೀ ಚಿತ್ರತಂಡದ ಸಂಘಟಿತ, ಸಾಮೂಹಿಕ ಪ್ರಯತ್ನ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಕಾಂತಾರ ಕಥೆ ಅನಾವರಣಗೊಳ್ಳುವ ಪರಿ ಮತ್ತುದೃಶ್ಯಗಳ ಕ್ರಿಯೇಟಿವಿಟಿ ಸಮಾಜದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆರೋಗ್ಯವನ್ನು ಸಾಬೀತುಪಡಿಸುವ ಮಾನದಂಡವಾಗಿ ಮೂಡಿ ಬಂದಿದೆ. ವಿಜೇತ್ ರವರು ಸುಸಂಸ್ಕೃತ ಮನೆತನದವರಾಗಿದ್ದು ಅವರ ಅಜ್ಜ ವಾಸುದೇವ ನಾಯ್ಕರು ಕೊಂಕಣಿ ಖಾರ್ವಿ ಸಮಾಜದ ಹೆಮ್ಮೆಯ ವಿದ್ಯಾರಂಗ ಮಿತ್ರ ಮಂಡಳಿ ಮತ್ತು ಹಲವು ಸಾಮಾಜಿಕ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೊಂಕಣಿ ಖಾರ್ವಿ ಸಮಾಜದ ಹೋಳಿ ಕುಣಿತದ ಹಾಡುಗಳನ್ನು ರಚಿಸಿ ಜನಪ್ರಿಯಗೊಳಿಸಿದ್ದು, ಅದಕ್ಕೆ ಅಕ್ಷರ ಮತ್ತು ದೃಶ್ಯ ರೂಪ ನೀಡಿ ಅಜರಾಮರಗೊಳಿಸಿದ್ದಾರೆ. ತಂದೆಯಾದ ವಿಜಯ್ ಮತ್ತು ತಾಯಿ ಅಮೃತ ಹಾಗೂ ಅಣ್ಣ ವಿಕಾಸರವರ ಅಭೂತಪೂರ್ವ ಬೆಂಬಲವನ್ನು ಸ್ಮರಿಸಿಕೊಳ್ಳುವ ವಿಜೇತ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಹೆತ್ತವರು ತನಗೆ ನೀಡಿದ ಬೆಂಬಲವನ್ನು ಅವಿಸ್ಮರಣೀಯ ಎನ್ನುತ್ತಾರೆ. ಛಾಯಾಗ್ರಹಣವೆಂಬುದು ಕೇವಲ ತಂತ್ರಜ್ಞಾನ ಕೌಶಲ್ಯವಲ್ಲ ಅದೊಂದು ಸೃಜನಶೀಲ ಕಲೆ. ಒದಗಿ ಬಂದ ಅವಕಾಶಗಳನ್ನು ಸದೋಪಯೋಗ ಪಡಿಸಿಕೊಂಡು ತನ್ನ ಅದ್ಬುತ ಪ್ರತಿಭೆಯನ್ನು ಕಾಂತಾರ ಚಿತ್ರದ ಛಾಯಾಗ್ರಹಣದ ಮೂಲಕ ಸಾದರಪಡಿಸಿದ ವಿಜೇತ್ ಖಾರ್ವಿಯವರಿಗೆ ಚಿತ್ರರಂಗದಲ್ಲಿ ಮತ್ತಷ್ಟೂ ಅವಕಾಶಗಳು ಕೂಡಿ ಬರಲಿ ಎಂದು ಖಾರ್ವಿ ಆನ್ಲೈನ್ ಶುಭ ಹಾರೈಸುತ್ತದೆ. ಕಾಂತಾರ ಸೃಷ್ಟಿಸಿದ ಶುಭ ಮನ್ವಂತರ ವಿಜೇತ್ ರವರ ಪಾಲಿಗೆ ಯಶಸ್ಸಿನ ಹೊಸ ಶಕೆ ಬರೆಯಲಿ ಎಂದು ಆಶಿಸುತ್ತೇನೆ. ಸುಧಾಕರ್ ಖಾರ್ವಿ Editor www.kharvionline.com